ಹೆತ್ತವರಿಗಾಗಿ (#9470)

*“ದೇವರೊಡನೆ ಸಂಭಾಷಿಸುವಾಗ ಯಾರು ಅವನ ಹೆತ್ತವನ್ನು ಸ್ಮರಿಸುತ್ತಾನೋ ಅವನು ಧನ್ಯನು.”  - ಬಾಬ್


ಓ ಪ್ರಭುವೇ, ನಮ್ಮ ದೀನ ಕೈಗಳು ನಿನ್ನ ಕೃಪೆ ಹಾಗೂ ಔದಾರ್ಯದ ಸ್ವರ್ಗದತ್ತ ಚಾಚಿರುವುದನ್ನು ನೀನು ನೋಡುತ್ತಿರುವೆ.  ನಿನ್ನ ಕೊಡುಗೆ ಹಾಗೂ ಉದಾರತೆಗಳ ನಿಧಿಗಳಿಂದ ಅವುಗಳು ತುಂಬುವಂತೆ ಅನುಗ್ರಹಿಸು.  ನಮ್ಮನ್ನೂ ಮತ್ತು ನಮ್ಮ ತಂದೆ ತಾಯಂದಿರನ್ನೂ ಕ್ಷಮಿಸು, ಹಾಗೂ ನಿನ್ನ ಮನೋಹರತೆ ಮತ್ತು ದೈವೀ ಉದಾರತೆಯ ಸಾಗರದಿಂದ ನಾವು ಬಯಸಿದುದೆಲ್ಲವನ್ನೂ ಈಡೇರಿಸು.  ಓ ನಮ್ಮ ಹೃದಯಗಳ ಪ್ರೀತಿ ಪಾತ್ರನೇ, ನಿನ್ನ ಪಥದಲ್ಲಿನ ನಮ್ಮ ಎಲ್ಲಾ ಕಾರ್ಯಗಳನ್ನೂ ಸ್ವೀಕರಿಸುವವನಾಗು ನೀನು, ಸತ್ಯವಾಗಿಯೂ, ಅತ್ಯಂತ ಪ್ರಬಲನೂ, ಮಹೋನ್ನತನೂ, ಅನುಪಮನೂ, ಕ್ಷಮಾಶೀಲನೂ, ಕೃಪಾಕರನೂ ಆಗಿರುವೆ.

-Bahá'u'lláh
-----------------------

ಹೆತ್ತವರಿಗಾಗಿ (#9471)

ಓ ಪ್ರಭುವೇ! ಈ ಮಹಾ ಶ್ರೇಷ್ಠಯುಗದಲ್ಲಿ, ತಮ್ಮ ಹೆತ್ತವರ ಪರವಾಗಿ ಮಕ್ಕಳ ಮಧ್ಯಸ್ಥಿಕೆಯನ್ನು ನೀನು ಸ್ವೀಕಾರ ಮಾಡಿರುವೆ.  ಇದು ಈ ಯುಗದ ಅಪರಿಮಿತ, ವಿಶೇಷವಾದ ಕೊಡುಗೆಗಳಲ್ಲೊಂದಾಗಿದೆ.  ಆದ್ದರಿಂದ, ಓ ದಯಾಳು ಪ್ರಭುವೇ, ನಿನ್ನ ಏಕಮೇವ ಹೊಸ್ತಿಲಲ್ಲಿ ಈ ನಿನ್ನ ಸೇವಕನ ವಿನಂತಿಯನ್ನು ಸ್ವೀಕರಿಸು ಹಾಗೂ ಅವನ ತಂದೆಯನ್ನು ನಿನ್ನ ಕೃಪಾಸಾಗರದಲ್ಲಿ ಮುಳುಗಿಸು.  ಏಕೆಂದರೆ, ನಿನ್ನ ಪ್ರೇಮದ ಪಥದಲ್ಲಿ ನಿನ್ನ ಸೇವೆ ಮಾಡಲು ಹಾಗೂ ಎಲ್ಲಾ ಸಮಯದಲ್ಲೂ ಅವಿರತವಾಗಿ ಶ್ರಮಿಸಲು ಈ ಪುತ್ರನು ಎದ್ದಿರುವನು.  ಸತ್ಯವಾಗಿಯೂ, ಕೊಡುವವನೂ, ಕ್ಷಮಾದಾತನೂ, ಹಾಗೂ ದಯಾಳುವೂ ನೀನೇ ಆಗಿರುವೆ.

-`Abdu'l-Bahá
-----------------------

