ಸಭೆಗಳಲ್ಲಿ (#9460)

ಓ ಕರುಣಾಕರ, ಸರ್ವಶಕ್ತನೇ! ಈ ಆತ್ಮಗಳ ಸಮೂಹವು ತಮ್ಮ ಮುಖಗಳನ್ನು ಯಾಚನೆಯಿಂದ ನಿನ್ನತ್ತ ತಿರುಗಿಸಿದೆ.  ಅತ್ಯಂತ ವಿನಮ್ರತೆ ಹಾಗೂ ದೈನ್ಯತೆಯಿಂದ ಅವರು ನಿನ್ನ ಸಾಮ್ರಾಜ್ಯದತ್ತ ನೋಡುತ್ತಿರುವರು ಮತ್ತು ಕ್ಷಮೆ ಹಾಗೂ ಮನ್ನಿಸುವಿಕೆಗಾಗಿ ನಿನ್ನಲ್ಲಿ ಯಾಚಿಸುತ್ತಿರುವರು.  ಓ ದೇವರೇ! ಈ ಸಭೆಯನ್ನು ನಿನ್ನ ಪ್ರೀತಿ ಪಾತ್ರವನ್ನಾಗಿ ಮಾಡು. ಈ ಆತ್ಮಗಳನ್ನು ಪಾವನಗೊಳಿಸು ಹಾಗೂ ಅವರ ಮೇಲೆ ನಿನ್ನ ಮಾರ್ಗದರ್ಶನದ ಕಿರಣಗಳನ್ನು ಚೆಲ್ಲುವಂತೆ ಮಾಡು, ಅವರ ಹೃದಯಗಳನ್ನು ಬೆಳಗಿಸು ಮತ್ತು ನಿನ್ನ ಹರ್ಷದಾಯಕ ವಾರ್ತೆಯಿಂದ ಅವರ ಚೈತನ್ಯಗಳನ್ನು ಉಲ್ಲಾಸಗೊಳಿಸು.  ನಿನ್ನ ಪವಿತ್ರ ಸಾಮ್ರಾಜ್ಯದಲ್ಲಿ ಅವರೆಲ್ಲರನ್ನೂ ಸ್ವಾಗತಿಸು.  ನಿನ್ನ ಅಕ್ಷಯವಾದ ಔದಾರ್ಯವನ್ನು ಅವರ ಮೇಲೆ ಅನುಗ್ರಹಿಸು.  ಈ ಪ್ರಪಂಚ ಹಾಗೂ ಮುಂದಿನ ಪ್ರಪಂಚದಲ್ಲಿ ಅವರನ್ನು ಸಂತೋಷಭರಿತರನ್ನಾಗಿ ಮಾಡು.

-`Abdu'l-Bahá
-----------------------

ಸಭೆಗಳಲ್ಲಿ (#9461)

ಓ ದೇವರೇ! ಸತ್ಯವಾಗಿಯೂ ನಾವೆಲ್ಲಾ ನಿನ್ನ ಪ್ರೀತಿಯ ಸುಗಂಧದಲ್ಲಿ ಒಂದುಗೂಡಿರುವೆವು ನಾವು ನಿನ್ನ ಸಾಮ್ರಾಜ್ಯದತ್ತ ತಿರುಗಿರುವೆವು.  ನಾವು ನಿನ್ನನ್ನಲ್ಲದೆ ಬೇರೇನನ್ನೂ ಕೋರುವುದಿಲ್ಲ ಹಾಗೂ ನಿನ್ನ ಸಂತೋಷವನ್ನಲ್ಲದೆ ಬೇರಾವುದಕ್ಕೂ ಆಸೆಪಡುವುದಿಲ್ಲ.  ಓ ದೇವರೇ! ಈ ಆಹಾರವು ನಿನ್ನ ಸ್ವರ್ಗದ ಆಧ್ಯಾತ್ಮಿಕ ಆಹಾರವಾಗಲಿ.  ಈ ಸಭೆಯನ್ನು ನಿನ್ನ ಪರಮ ಶ್ರೇಷ್ಠ ಸಮೂಹವನ್ನಾಗಿಸುವಂತೆ ಸಮ್ಮತಿಸು.  ಅವರು ಮಾನವ ಕುಲಕ್ಕೆ ಸಜೀವ ತುಂಬುವ ಪ್ರೀತಿಯ ಕಾರಣವಾಗಲಿ ಮತ್ತು ಮಾನವ ಜನಾಂಗಕ್ಕೆ ಪ್ರಕಾಶದ ಮೂಲವಾಗಲಿ,  ಭೂಮಿಯ ಮೇಲೆ ಅವರು ನಿನ್ನ ಮಾರ್ಗದರ್ಶನದ ಸಾಧನವಾಗಲಿ, ನಿಜವಾಗಿಯೂ ನೀಣು ಪ್ರಬಲನೂ, ಕೊಡುಗೈದಾನಿಯೂ, ಕ್ಷಮಾದಾತನೂ ಮತ್ತು ಸರ್ವಶಕ್ತನೂ ಆಗಿರುವೆ!

-`Abdu'l-Bahá
-----------------------

ಸಭೆಗಳಲ್ಲಿ (#9462)

ಓ ದೈವೀ ಅನುಗ್ರಹವೇ! ಈ ಸಭೆಯು ನಿನ್ನ ಸೌಂದರ್ಯದತ್ತ ಆಕರ್ಷಿತರಾಗಿರುವ ಹಾಗೂ ನಿನ್ನ ಪ್ರೀತಿಯ ಅಗ್ನಿಯಿಂದ ಜಾಜ್ವಲ್ಯಮಾನರಾಗಿರುವ ನಿನ್ನ ಮಿತ್ರರಿಂದ ತುಂಬಿಕೊಂಡಿದೆ.  ಈ ಆತ್ಮಗಳನ್ನು ಸ್ವರ್ಗೀಯ ದೇವತೆಗಳನ್ನಾಗಿ ರೂಪಿಸು.  ನಿನ್ನ ಪವಿತ್ರಾತ್ಮದ ಉಸಿರಿನ ಮೂಲಕ ಅವರನ್ನು ಪುನರ್ಜೀವಿತಗೊಳಿಸು, ಅವರಿಗೆ ವಾಕ್ ಚತುರತೆಯನ್ನೂ, ದೃಢಸಂಕಲ್ಪದ ಹೃದಯಗಳನ್ನೂ ದಯಪಾಲಿಸು, ಸ್ವರ್ಗೀಯ ಶಕ್ತಿ ಹಾಗೂ ಅಪಾರ ಕರುಣೆಯನ್ನು ಅವರಿಗೆ ಅನುಗ್ರಹಿಸು. ಅವರನ್ನು ಮಾನವ ಜನಾಂಗದ ಏಕತೆಯ ಪ್ರಚಾರಕರಾಗುವಂತೆ ಮಾಡು ಹಾಗೂ ಅವರು ಮಾನವತೆಯ ಲೋಕದಲ್ಲಿ ಪ್ರೀತಿ ಮತ್ತು ಮೈತ್ರಿಯ ಕಾರಣರಾಗುವಂತೆ ಮಾಡು, ಇದರಿಂದ ಆಪತ್ಕಾರಿ ಕತ್ತಲೆಯಾದ ತಿಳಿಗೇಡಿ ಪೂರ್ವಾಗ್ರಹಗಳು, ಸತ್ಯಸೂರ್ಯನ ಬೆಳಕಿನ ಮೂಲಕ ಮಾಯವಾಗಬಹುದು, ಈ ಮಂಕುಕವಿದ ಪ್ರಪಂಚವು ಪ್ರಕಾಶಿತಗೊಳ್ಳಬಹುದು, ಈ ಭೌತಿಕ ಪ್ರಪಂಚವು ಆತ್ಮ ಪ್ರಪಂಚದ ಕಿರಣಗಳನ್ನು ಪಡೆಯುವಂತಾಗಬಹುದು, ಈ ವಿವಿಧ ವರ್ಣಗಳು ಒಂದಾಗಿ ಒಂದೇ ಬಣ್ಣವಾಗಬಹುದು, ಹಾಗೂ ಸ್ತೋತ್ರದ ಸುಮಧುರ ಸ್ವರವು ನಿನ್ನ ಪವಿತ್ರತೆಯ ಸಾಮ್ರಾಜ್ಯಕ್ಕೇರಬಹುದು.  ನಿಜವಾಗಿಯೂ, ನೀನು ಸರ್ವಶಕ್ತನೂ, ಸರ್ವಸಮರ್ಥನೂ ಆಗಿರುವೆ!

-`Abdu'l-Bahá
-----------------------

ಸಭೆಗಳಲ್ಲಿ (#9463)

ಓ ಕರುಣಾಮಯಿಯಾದ ದೇವರೇ, ಶಕ್ತಿವಂತನೂ, ಪರಾಕ್ರಮಿಯೂ ಆದ ಪ್ರಭುವೇ ನೀನು, ಅತ್ಯಂತ ಪ್ರೀತಿಯ ತಂದೆಯೇ, ಈ ನಿನ್ನ ಸೇವಕರು ಒತ್ತಟ್ಟಿಗೆ ಕಲೆತು ನಿನ್ನ ಅಭಿಮುಖರಾಗಿದ್ದಾರೆ. ನಿನ್ನಲ್ಲಿ ವಿನಂತಿ, ಮಾಡಿಕೊಳ್ಳುತ್ತಿದ್ದಾರೆ.  ನಿನ್ನಿಂದ ಮಿತಿಯಿಲ್ಲದ ದಯೆಯ ಭರವಸೆ ಬರಲೆಂದು ನಿನ್ನ ಆನಂದವೇ ವಿನಾ ಅವರಿಗೆ ಮತ್ತ್ಯಾವ ಉದ್ದೀಶ್ಯವೇ ಇಲ್ಲ.  ಮಾನವ ಕೋಟಿಯ ಸೇವೆಯೊಂದಲ್ಲದೆ ಬೇರಾವ ಇಚ್ಛೆಯೂ ಅವರಿಗಿಲ್ಲ.  ಈ ಗುಂಪು ತೇಜಸ್ವಿಯಾಗುವಂತೆ ಮಾಡು. ಹೃದಯಗಳನ್ನೆಲ್ಲ ದಯಾಪೂರಿತವನ್ನಾಗಿಸು.  ಪವಿತ್ರ ಆತ್ಮದ ಔದಾರ್ಯವನ್ನು ಕರುಣಿಸುವವನಾಗು, ಸ್ವರ್ಗಸದೃಶವಾದ ಶಕ್ತಿಯನ್ನು ದಯಪಾಲಿಸು,  ಶ್ರೇಷ್ಠವಾದ ಮನಸ್ಸನ್ನು ನೀಡಿ ಆಶೀರ್ವಾದಿಸು. ನಮ್ರ ಭಾವನೆಯಿಂದ ಹಾಗೂ ಪಶ್ಚಾತ್ತಾಪ ಬುದ್ಧಿಯಿಂದ ನಿನ್ನತ್ತ ಗಮನಹರಿಸಿ, ಮಾನವ ಕೋಟಿಯ ಸೇವೆಯಲ್ಲಿ ಮಗ್ನರಾಗಲು ಅವರ ಪ್ರಾಮಾಣಿಕತೆಯನ್ನು ಹೆಚ್ಚಿಸು.  ಪ್ರತಿಯೊಬ್ಬನೂ ಪ್ರಕಾಶಮಾನವಾದ ಮೇಣದ ಬತ್ತಿಯಂತಾಗಲಿ, ಪ್ರತಿಯೊಬ್ಬನೂ ಜಾಜ್ವಲ್ಯಮಾನವಾದ ನಕ್ಷತ್ರದಂತಾಗಲಿ, ಪ್ರತಿಯೊಬ್ಬನೂ ರಮ್ಯವಾದ ಬಣ್ಣದಂತಾಗಲಿ, ದೈವೀ ರಾಜ್ಯದಲ್ಲಿ ಪ್ರತಿಯೊಬ್ಬನೂ ಸುಗಂಧದ ಪರಮಾವಧಿಯಾಗಲಿ, ಓ ಪ್ರಿಯ ತಂದೆಯೇ, ನಿನ್ನ ಅಶೀರ್ವಾದವನ್ನು ದಯಪಾಲಿಸು,  ನಮ್ಮ ಲೋಪದೋಷಗಳನ್ನು ಗಮನಿಸಬೇಡ.  ನಿನ್ನ ರಕ್ಷಣೆಯಲ್ಲಿ ನಮ್ಮನ್ನು ಕಾಪಾಡು.  ನಮ್ಮ ಪಾಪಗಳನ್ನು ಲೆಕ್ಕಿಸಬೇಡ, ಸ್ಮರಿಸಬೇಡ, ನಿನ್ನ ಕರುಣೆಯಿಂಡ ನಮ್ಮನ್ನು ಪಾರುಗಾಣಿಸು. ನಾವು ದರಿದ್ರರು ನೀನು ಶ್ರೀಮಂತ ನಾವು ರೋಗ ಪೀಡಿತರು ನೀನು ವೈದ್ಯ, ನಾವು ನಿರ್ಗತಿಕರು, ನೀನು ಉದಾರಿ.  ಓ ಪ್ರಭುವೇ, ನಿನ್ನ ದಯೆ ನಮ್ಮ ಮೇಲಿರಲಿ ನೀನು ಸಮರ್ಥದಾತ ಹಾಗೂ ಉಪಕಾರಿ.

-`Abdu'l-Bahá
-----------------------

ಸಭೆಗಳಲ್ಲಿ (#9464)

ಓ ಕರುಣೆಯ ಪ್ರಭುವೇ, ಇವರೆಲ್ಲ ನಿನ್ನ ಸೇವಕರು, ನಿನ್ನ ಉದಾರತೆ ಹಾಗೂ ಆಶೀರ್ವಾದಕ್ಕಾಗಿ ಕಾದು ಕುಳಿತಿರುವರು ಇಲ್ಲಿ,  ದೇವರೇ, ನಿನ್ನ ಏಕಮಾತ್ರ ಸ್ವರೂಪದ ಸೂಚನೆಯನ್ನು ಆಧಾರಗೊಳಿಸು.  ಈ ಮಾನವರಲ್ಲಿ ಅಡಗಿರುವ ಹಾಗೂ ಅಗೋಚರವಾಗಿರುವಂತೆ,  ಮಾಡಿರುವ ಸದ್ಗುಣಗಳನ್ನು ಸಾಕ್ಷಾತ್ಕರಿಸು ಹಾಗೂ ಪ್ರಕಟಿಸು. ದೇವರೇ, ನಾವು ಗಿಡಗಳಂತೆ, ನಿನ್ನ ಉದಾರತೆ ಮಳೆಯಂತೆ, ನಿನ್ನ ಔದಾರ್ಯದ ಆಸರೆಯಿಂದ ಈ ಗಿಡಗಳು ಬೆಳೆದು ಪ್ರಫುಲ್ಲಿತವಾಗುವಂತೆ ಮಾಡು.  ನಾವೆಲ್ಲ ನಿನ್ನ ಆಜ್ಞಾಪಾಲಕರು.  ಈ ಇಹ ಪ್ರಪಂಚದ ಬದುಕಿನ ಸಂಕೋಲೆಗಳಿಂದ ನಮ್ಮನ್ನು ಪಾರುಗಾಣಿಸು.  ನಾವು ಅಜ್ಞಾನಿಗಳು; ಬುದ್ಧಿವಂತರನ್ನಾಗಿ ಮಾಡು.  ನಾವು ಸತ್ತವರು, ಪ್ರಾಣಭಿಕ್ಷೆ ನೀಡು.  ನಾವು ಇಚ್ಛಾಪರರು, ಸ್ಫೂರ್ತಿ ತುಂಬು, ನಾವು ನಿರಾವಲಂಬಿಗಳು, ನಿನ್ನ ರಹಸ್ಯದ ಆಪ್ತರನ್ನಾಗಿ ಮಾಡು ನಮ್ಮನ್ನು ನಾವು ಅಗತ್ಯವುಳ್ಳವರು, ನಿನ್ನ ಅಪಾರ ಸಂಪತ್ತಿನಿಂದ ನಮ್ಮನ್ನು ಸಿರಿವಂತರನ್ನಾಗಿ ಮಾಡಿ ಅನುಗ್ರಹಿಸು.  ಭಗವಂತನೇ, ನಮ್ಮಲ್ಲಿ ಚೇತನವನ್ನು ತುಂಬು, ದೃಷ್ಟಿಯನ್ನು ನೀಡು, ಆಲಿಸುವಂತೆ ಮಾಡು.  ಜೀವಿತದ ರಹಸ್ಯಗಳ ಪರಿಚಯಗೊಳಿಸು.  ಇದರಿಂದ ನಿನ್ನ ಮಹಿಮೆಯ ಗುಟ್ಟು ನಮಗೆ ಗ್ರಹಿಕೆಯಾಗಿ ನಾವು ನಿನ್ನ ಶ್ರೇಷ್ಠತೆಯನ್ನು ಒಪ್ಪಿಕೊಳ್ಳುವಂತೆ ಮಾಡು, ಪ್ರತಿ ಔದಾರ್ಯವೂ ನಿನ್ನಿಂದ ಉತ್ಪತ್ತಿ, ಪ್ರತಿ ಅನುಗ್ರಹವೂ ನಿನ್ನದೇ, ನೀನು ಪರಾಕ್ರಮಿ ಶಕ್ತಿವಂತ, ದಾನಿ, ಘನ ಉದಾರಿ.      


*“ಸಭೆಯ ಸ್ಥಾಳದಲ್ಲಿ ಯಾವಾಗಲಾದರೂ ಜನ ಸಮೂಹವು ಒಂದು ಸೇರಿ, ದೇವರ ಸ್ತುತಿಯಲ್ಲಿ ನಿರತರಾಗಿರುವುದೋ, ಹಾಗೂ ದೇವರ ರಹಸ್ಯಗಳ ಬಗ್ಗೆ ಪರಸ್ಪರ ಮಾತನಾಡುವುದೋ, ನಿಸ್ಸಂಶಯವಾಗಿ ಪವಿತ್ರ ಆತ್ಮದ ಮಂದಾನಿಲವು ಅವರ ಮೇಲೆ ಶಾಂತವಾಗಿ ಬೀಸುವುದು ಮತ್ತು ಪ್ರತಿಯೊಬ್ಬರೂ ಅದರಲ್ಲಿ ಒಂದು ಪಾಲನ್ನು ಪಡೆಯುವರು.”

-`Abdu'l-Bahá
-----------------------

