ರಾತ್ರಿ (#9467)

ಓ ನನ್ನ  ಪರಮಾತ್ಮನೇ, ಒಡೆಯನೇ, ನನ್ನ ಆಕಾಂಕ್ಷೆಯನ್ನು ಪೂರೈಸಬಲ್ಲವನೇ, ಈ ನಿನ್ನ ಸೇವಕ ನಿನ್ನ ಕರುಣೆಯ ರಕ್ಷಣೆಯಲ್ಲಿ ನಿದ್ರೆ ಮಾಡಬಯಸುತ್ತಾನೆ.  ನಿನ್ನ ಘನತೆಯ ಆಶ್ರಯದ ಕೆಳಗೆ ವಿಶ್ರಾಂತಿ ಪಡೆಯಲು ಇಚ್ಛಿಸುತ್ತಾನೆ.  ನಿನ್ನ ಪೋಶಣೆ ಹಾಗೂ ಸಂರಕ್ಷಣೆಗಾಗಿ ಮೊರೆಯಿಡುತ್ತಾನೆ.
ಓ ಪ್ರಭುವೇ, ಎವೆಯಿಕ್ಕದೆ ನಿನ್ನ ಕಣ್ಣುಗಳಿಂದ ನಿನ್ನನ್ನಲ್ಲದೆ ಬೇರೆ ಯಾರನ್ನೂ ನೋಡದಂತಿರಲು ನನ್ನ ಕಣ್ಣನ್ನು ರಕ್ಷಿಸಬೇಕೆಂದು ಬೇಡುವೆ.  ನಿನ್ನ ಸಂಜ್ಞೆಗಳನ್ನು ಅಲ್ಲದೆ ನಿನ್ನ ಸಾಕ್ಷಾತ್ಕಾರವನ್ನು ಗುರುತಿಸುವಂತೆ ನನ್ನ ದೃಷ್ಟಿಯನ್ನು ದೃಢಪಡಿಸು.  ಯಾರ ಅಖಂಡ ಸಾಕ್ಷಾತ್ಕಾರದ ಮುಂದೆ ಬಲದ ಪ್ರಭಾವವೂ ಕೂಡ ಬೆದರಿಬೆಚ್ಚಿಬಿದ್ದೀತೋ ಅಂಥಾ ಪರಮ ಪ್ರಭಾವಶಾಲಿಯೂ ನೀನೇ.  ಸರ್ವಶಕ್ತ, ಸರ್ವವಿಜಯಿ, ನಿಯಮಾತೀತನಾದ ನೀನಲ್ಲದೆ ಬೇರೆ ದೇವರಿಲ್ಲ.

-Bahá'u'lláh
-----------------------

ರಾತ್ರಿ (#9468)

ಓ ದೇವರೇ, ನನ್ನ ದೇವರೇ, ನಿನ್ನಿಂದ ಅಗಲಿರುವ ಕಾರಣದಿಂದಾಗಿ ನಿನ್ನನ್ನು ಹಂಬಲಿಸುವವರ ಕಣ್ಣುಗಳು ಎಚ್ಚೆತ್ತಿರುವಾಗ ನಾನು ಹೇಗೆ ನಿದ್ರಿಸಲು ಆಯ್ದುಕೊಳ್ಳಲಿ, ನಿನ್ನ ಪ್ರೇಮಿಗಳ ಆತ್ಮಗಳು ನಿನ್ನ ಸಮ್ಮುಖದಿಂದ ದೂರ ಸರಿದಿರುವುದರಿಂದ ದುಃಖ ಪೀಡಿತರಾಗಿರುವಾಗ ನಾನು ಹೇಗೆ ವಿಶ್ರಾಂತಿ ಪಡೆಯಲಿ?
ಓ ನನ್ನ ಪ್ರಭುವೇ, ನಿನ್ನ ಸಾಮಥ್ರ್ಯ ಹಾಗೂ ನಿನ್ನ ರಕ್ಷಣೆಯು ಬಲಗೈಯಲ್ಲಿ ನನ್ನ ಚೈತನ್ಯ ಹಾಗೂ ನನ್ನ ಸಂಪೂರ್ಣ ಅಸ್ತಿತ್ವವನ್ನೇ ಒಪ್ಪಿಸಿದ್ದೇನೆ ಮತ್ತು ನನ್ನ ಶಿರಸ್ಸನ್ನು ನಿನ್ನ ಶಕ್ತಿಯ ಮೂಲಕ ನನ್ನ ದಿಂಬಿನ ಮೇಲಿರಿಸುತ್ತೇನೆ ಮತ್ತು ನಿನ್ನ ಇಚ್ಚೆ ಹಾಗೂ ನಿನ್ನ ಸಂತೃಪ್ತಿಗೆ ತಕ್ಕಂತೆ ಮೇಲೆತ್ತುತ್ತೇನೆ.  ನೀನು ಸತ್ಯವಾಗಿಯೂ, ಸಂರಕ್ಷಕ, ಕಾಪಾಡತಕ್ಕವ, ಸರ್ವಸಮರ್ಥ, ಪರಮ ಬಲಶಾಲಿ.
ನಿನ್ನ ಸರ್ವಶಕ್ತಿಯ ಪ್ರಮಾಣವಾಗಿ! ನಾನು ನಿದ್ರಿಸುತ್ತಿರಲಿ ಅಥವಾ ಎಚ್ಚೆತ್ತಿರಲಿ, ನೀನು ಇಚ್ಛಿಸುವುದನ್ನಲ್ಲದೆ ಬೇರೇನನ್ನೂ ಬೇಡೆನು.  ನಾನು ನಿನ್ನ ಸೇವಕ ಹಾಗೂ ನಿನ್ನ ಕೈಯಾಳಾಗಿರುವೆ.  ನಿನ್ನ ಸಂತೃಪ್ತಿಯ ಸುಗಂಧವನ್ನು ಯಾವುದು ಬೀರುವುದೋ ಅದನ್ನು ನಾನು ಮಾಡುವಂತೆ ನನ್ನನ್ನು ಉದಾರತೆಯಿಂದ ಸಹಾಯ ಮಾಡು.  ನಿಜವಾಗಿಯೂ, ಇದು ನನ್ನ ಹಾರೈಕೆಯಾಗಿದೆ ಹಾಗೂ ನಿನ್ನ ಸಾಮೀಪ್ಯವನ್ನು ಆನಂದಿಸುವವರ ಹಾರೈಕೆಯೂ ಆಗಿದೆ.  ಓ ಪ್ರಪಂಚಗಳ ಪ್ರಭುವಾಗಿರುವ ನಿನಗೆ ಸ್ತೋತ್ರವಾಗಲಿ.

-Bahá'u'lláh
-----------------------

