ರಕ್ಷಣೆಗಾಗಿ (#9474)

ಓ ಪ್ರಭು ನನ್ನ ದೇವರೇ, ನಿನ್ನ ನಾಮದ ಸ್ತುತಿಯಾಗಲಿ! ಯಾವ ನಾಮದ ಮೂಲಕ ಕಾಲವು ನಿಂತು ಹೋಗಿತ್ತೋ, ಪುನರ್ಜೀವನ ಸಾಧ್ಯವಾಗಿತ್ತೋ, ಭೂಮಿ ಮತ್ತು ಸ್ವರ್ಗದಲ್ಲಿರುವವರೆಲ್ಲರೂ ಭಯದಿಂದ ಕಂಪಿತರಾಗಿದ್ದರೋ ಅದರಿಂದ, ನಿನ್ನ ಬಳಿ ತಿರುಗಿ ನಿನ್ನ ಧರ್ಮಕ್ಕೆ ಸಹಾಯ ಮಾಡಿದವರ ಹೃದಯಗಳನ್ನು ಸಂತೋಷಪಡಿಸುವಂತಹ ನಿನ್ನ ಕೃಪಾಸ್ವರ್ಗ ಹಾಗೂ ನಿನ್ನ ಸುಕೋಮಲ ಕರುಣೆಯ ಮೋಡಗಳಿಂದ ವರ್ಷಿಸುವಂತೆ ಮಾಡೆಂದು ನಾನು ನಿನ್ನಲ್ಲಿ ಪ್ರಾರ್ಥಿಸುತ್ತಿದ್ದೇನೆ.
ಓ ನನ್ನ ಪ್ರಭುವೇ, ನಿನ್ನ ಸೇವಕರು ಮತ್ತು ಸೇವಕಿಯರನ್ನು ವ್ಯರ್ಥ ಭ್ರಮೆ ಮತ್ತು ತೋರಿಕೆಯ ಕಲ್ಪನೆಗಳಿಂದ ಕ್ಷೇಮವಾಗಿರಿಸು ಹಾಗೂ ಅವರಿಗೆ ನಿನ್ನ ಅನುಗ್ರಹದ ಕರಗಳಿಂದ ಮೃದುವಾಗಿ ಹರಿಯುವ ನಿನ್ನ ಜ್ಞಾನ ಬಲದ ಗುಟುಕನ್ನು ನೀಡು.
ನೀನು, ನಿಜವಾಗಿಯೂ, ಸರ್ವಶಕ್ತ, ಮಹೋನ್ನತ, ಸರ್ವ ಕ್ಷಮದಾತ, ಅತ್ಯಂತ ಉದಾರಿಯೂ ಆಗಿರುವೆ.

-Bahá'u'lláh
-----------------------

ರಕ್ಷಣೆಗಾಗಿ (#9475)

ಓ ದೈವೀ ಅನುಗ್ರಹವೇ, ದಯಾಪಾತ್ರರು ನಾವು, ದಯಪಾಲಿಸು ನಿನ್ನ ನೆರವನ್ನು ನೆಲೆಯಿಲ್ಲದ ಸಂಚಾರಿಗಳು, ನೀಡು ನಿನ್ನ ಆಶ್ರಯವನ್ನು; ಚದುರಿದವರು, ಒಂದು ಗೂಡಿಸು ನಮ್ಮನ್ನು; ದಾರಿ ತಪ್ಪಿದವರು, ಸೇರಿಸು ನಿನ್ನೆಡೆಗೆ ನಮ್ಮನ್ನು; ವಂಚಿತರು; ಅನುಗ್ರಹಿಸು ನಮ್ಮ ಮೇಲೆ ನಮ್ಮ ಪಾಲಿನ ಒಂದು ಭಾಗವನ್ನು; ಬಾಯಾರಿದವರು, ಜೀವ ಜಲ ಚಿಲುಮೆಯತ್ತ ನಡೆಸು ನಮ್ಮನ್ನು; ದುರ್ಬಲರು, ನಿನ್ನ ಧರ್ಮದ ಸಹಾಯಕರಾಗುವಂತೆಯೂ, ಮಾರ್ಗ ದರ್ಶನದ  ಹಾದಿಯಲ್ಲಿ ನಮ್ಮನ್ನು ನಾವೇ ತ್ಯಾಗ ಜೀವಿಯನ್ನಾಗಿ ಅರ್ಪಿಸುವಂತೆಯೂ ನಾವು ಎದ್ದೇಳುವಂತೆ ನಮ್ಮನ್ನು ಬಲಪಡಿಸು.

-`Abdu'l-Bahá
-----------------------

