ನಿಧನರಾದವರಿಗಾಗಿ (#9438)

ಈ ಪ್ರಾರ್ಥನೆಗಳನ್ನು ಹದಿನೈದು ವರ್ಷ ಮೇಲ್ಪಟ್ಟ ಬಹಾಯಿಗಳಗಾಗಿ ಉಪಯೋಗಿಸಬೇಕು.
“ಧಾರ್ಮಿಕ ಸಮೂಹದಲ್ಲಿ ಪಠಿಸುವಂತಹ ಏಕೈಕ ಬಹಾಯಿ ಅನಿವಾರ್ಯ ಪ್ರಾರ್ಥನೆ ಇದಾಗಿದೆ, ಇದನ್ನು ಒಬ್ಬರು ಪಠಿಸುತ್ತಿರುವಾಗ ಉಪಸ್ಥಿತರೆಲ್ಲರೂ ನಿಂತುಕೊಳ್ಳಬೇಕು.  ಈ ಪ್ರಾರ್ಥನೆಯನ್ನು ಹೇಳುವಾಗ ಸಂಪೂಜನಾ ಸ್ಥಳದೆಡೆ ಮುಖ ತಿರುಗಿಸುವ ಅವಶ್ಯಕತೆಯಿರುವುದಿಲ್ಲ.”
ಓ ನನ್ನ ದೇವರೇ! ನಿನ್ನ ಹೊರತು ಉಳಿದೆಲ್ಲವುಗಳಿಂದ ಅಲಿಪ್ತನಾಗಿ ತನ್ನ ಮುಖವನ್ನು ನಿನ್ನೆಡೆಗೆ ತಿರುಗಿಸಿರುವ, ನಿನ್ನನ್ನು ಮತ್ತು ನಿನ್ನ ಸಂಕೇತಗಳನ್ನು ನಂಬಿರುವ ಈತ ನಿನ್ನ ಸೇವಕ. ನಿನ್ನ ಸೇವಕನ ಮಗ ನಿಜವಾಗಿಯೂ ನೀನೇ ಕರುಣೆ ತೋರುವವರಲ್ಲಿ ಮಹಾ ಕರುಣಾಶಾಲಿಯಾಗಿದ್ದೀಯೆ.
ಮಾನವರ ತಪ್ಪುಗಳನ್ನು ಮರೆಯಾಗಿಟ್ಟು ಅವರ ಪಾಪಗಳನ್ನು ಮನ್ನಿಸುವಾತನೇ, ನಿನ್ನ ಔದಾರ್ಯದ ಸ್ವರ್ಗಕ್ಕೆ ಮತ್ತು ನಿನ್ನ ಅನುಗ್ರಹದ ಸಾಗರಕ್ಕೆ ಯೋಗ್ಯವಾಗಿರುವಂತೆ ಇವನೊಡನೆಯೂ ವ್ಯವಹರಿಸು.  ಭೂ ಸ್ವರ್ಗಗಳ ಮೂಲಕ್ಕಿಂತಲೂ ಮೊದಲಿನ ನಿನ ಸರ್ವಶ್ರೇಷ್ಠ ದಯೆಯ ಆವರಣದೊಳಗೆ ಅವನಿಗೆ ಪ್ರವೇಶ ನೀಡು.  ಎಂದೆಂದಿಗೂ ಕ್ಷಮಾಶೀಲನಾಗಿರುವ, ಮಹಾ ಉದಾರಿಯಾಗಿರುವ ನೀನಲ್ಲದೆ ಬೇರೆ ದೇವರಿಲ್ಲ.
(ಆ ತರುವಾಯ ‘ಅಭಾ ಓ ಅಭಾ’ ಎಂಬ ಶುಭಾಶಯವನ್ನು ಆತ ಆರು ಸಲ ಪುನರುಚ್ಚರಿಸಲಿ ನಂತರ ಈ ಕೆಳಗಿನ ಪ್ರತಿಯೊಂದು ಶ್ಲೋಕವನ್ನು ಹತ್ತೊಂಬತ್ತು ಸಲ ಪುನರುಚ್ಚರಿಸಲಿ)
ನಾವೆಲ್ಲರೂ, ನಿಜವಾಗಿಯೂ, ದೇವರನ್ನು ಆರಾಧಿಸುವೆವು.  
ನಾವೆಲ್ಲರೂ, ನಿಜವಾಗಿಯೂ, ದೇವರ ಮುಂದೆ ತಲೆಬಾಗಿಸುವೆವು
ನಾವೆಲ್ಲರೂ, ನಿಜವಾಗಿಯೂ, ದೇವರಲ್ಲಿ
ಭಕ್ತಿಯುಳ್ಳವರಾಗಿರುವೆವು
ನಾವೆಲ್ಲರೂ, ನಿಜವಾಗಿಯೂ, ದೇವರಿಗೆ ಸ್ತುತಿಯನ್ನು
ಸಲ್ಲಿಸುತ್ತಿರುವೆವು
ನಾವೆಲ್ಲರೂ, ನಿಜವಾಗಿಯೂ, ದೇವರಿಗೆ ಕೃತಜ್ಞತೆಯನ್ನು
ಅರ್ಪಿಸಲು ಶರಣಾಗತರಾಗಿರುವೆವು
ನಾವೆಲ್ಲರೂ, ನಿಜವಾಗಿಯೂ, ದೇವರಲ್ಲಿ
ತಾಳ್ಮೆಯುಳ್ಳವರಾಗಿರುವೆವು.
(ಮೃತರು ಸ್ತ್ರೀ ಆಗಿದ್ದರೆ ಹೀಗೆ ಹೇಳಲಿ : ಈಕೆ ನಿನ್ನ ಸೇವಕಿ, ಸೇವಕಿಯ ಮಗಳು ಇತ್ಯಾದಿ)

-Bahá'u'lláh
-----------------------

ನಿಧನರಾದವರಿಗಾಗಿ (#9439)

.
ನಿನ್ನನ್ನು ಕೊಂಡಾಡಲಿ, ಓ ಪ್ರಭುವೇ ನನ್ನ ದೇವರೇ! ಯಾರನ್ನು ನೀನು ನಿನ್ನ ಚಿರಂತನ ಸಾರ್ವಭೌಮತೆಯ ಶಕ್ತಿಯ ಮೂಲಕ ಉನ್ನತವಾಗಿರಿಸಿರುವೆಯೋ ಅವನನ್ನು ಕಡೆಗಣಿಸದಿರು, ಯಾರನ್ನು ನಿನ್ನ ನಿತ್ಯತೆಯ ಪೂಜಾ ಸ್ಥಾನವನ್ನು ಸೇರುವಂತೆ ಮಾಡಿರುವೆಯೋ ಅವರನ್ನು ಕಡೆಗಣಿಸದಿರು, ಯಾರನ್ನು ನಿನ್ನ ನಿತ್ಯತೆಯ ಪೂಜಾ ಸ್ಥಾನವನ್ನು ಸೇರುವಂತೆ ಮಾಡಿರುವೆಯೋ ಅವರನ್ನು ನಿನ್ನಿಂದ ಬಹುದೂರಕ್ಕೆ ಸ್ಥಳಾಂತರಿಸದಿರು.  ಓ ನನ್ನ ದೇವರೇ, ನಿನ್ನ ಪ್ರಭುತ್ವದಿಂದ ನಿನ್ನಾಶ್ರಯಿಸಿದವರನ್ನು ನೀನು ಕೈ ಬಿಡುವೆಯಾ?” ಓ ನನ್ನ ಆಕಾಂಕ್ಷೆಯೇ, ಯಾರಿಗೆ ನೀನೊಬ್ಬ ಆಶ್ರಯದಾತನಾಗಿರುವೆಯೋ, ಅವನನ್ನು ನಿನ್ನಿಂದ ದೂರ ಸರಿಸುವೆಯಾ? ಯಾರನ್ನು ನೀನು ಮೇಲೆತ್ತಿರುವೆಯೋ ಅವನನ್ನು ಕೆಳಕ್ಕಿಳಿಸುವೆಯಾ ಅಥವಾ ನಿನ್ನ ಸ್ಮರಣೆ ಮಾಡಲು ಶಕ್ತರನ್ನಾಗಿಸಿದವರನ್ನು ಮರೆತುಬಿಡುವೆಯಾ?
ನಿನ್ನ ಸ್ತೋತ್ರವಾಗಲಿ, ಓ ದೇವರೇ, ನಿನ್ನನ್ನು ಅಪಾರವಾಗಿ ಕೊಂಡಾಡಲಿ! ಅನಾದಿ ಕಾಲದಿಂದಲೂ ಇಡೀ ಸೃಷ್ಟಿಯ ರಾಜನು ಹಾಗೂ ಅದರ ಪ್ರಧಾನ ಚಾಲಕನೂ ನೀನೇ ಆಗಿರುವೆ, ಮತ್ತು ನೀನು ಸೃಷ್ಟಿಸಿರುವ ಎಲ್ಲಾ ವಸ್ತುಗಳ ಅಮರ ಪ್ರಭು ಮತ್ತು ವಿಧಾಯಕನಾಗಿ ನೀನೇ ಉಳಿಯುವೆ.  ನೀನು ಸ್ತುತಿಸಲ್ಪಡಲಿ, ಓ ನನ್ನ ದೇವರೇ! ನೀನು ನಿನ್ನ ಸೇವಕರಿಗೆ ಕರುಣೆ ತೋರಿಸುವುದನ್ನು ನಿಲ್ಲಿಸಿದ್ದಲ್ಲಿ ಅವರಿಗೆ ಕರುಣೆಯನ್ನು ತೋರುವವರಾರು, ಮತ್ತು ನಿನ್ನ ಪ್ರೀತಿಪಾತ್ರರಿಗೆ ನೀನು ಸಹಾಯ ನಿರಾಕರಿಸಿದ್ದಲ್ಲಿ, ಅವರಿಗೆ ನೆರವು ನೀಡುವವರಾರಿಹರು?
ಸ್ತುತಿಸಲ್ಪಟ್ಟಿದ್ದೀಯೇ, ನೀನು ಅಪಾರವಾಗಿ ಕೊಂಡಾಡಲ್ಪಟ್ಟಿದ್ದಿಯೇ! ನೀನು ನಿನ್ನ ಸತ್ಯತೆಯಲ್ಲಿ ಆರಾಧ್ಯನಾಗಿರುವೆ ಮತ್ತು ನಿಜವಾಗಿಯೂ ನಾವೆಲ್ಲರೂ ನಿನ್ನನ್ನು ಆರಾಧಿಸುವೆವು; ನಿನ್ನ ನ್ಯಾಯದಲ್ಲಿ ನೀನು ವ್ಯಕ್ತವಾಗಿರುವೆ ಮತ್ತು ನಿನ್ನನ್ನು ನಿಜವಾಗಿ ನಾವೆಲ್ಲರೂ ಸಾಕ್ಷೀಕರಿಸುವೆವು.  ಸತ್ಯವಾಗಿಯೂ ನಿನ್ನ ಕೃಪೆಯಲ್ಲಿ ನೀನು ಪ್ರಿಯತಮನಾಗಿರುವೆ.  ಆಪತ್ತಿನಲ್ಲಿ ಸಹಾಯಕನೂ, ಸ್ವಯಮಾಧಾರನೂ ಆದ ನೀನಲ್ಲದೆ ಬೇರೆ ದೇವರಿಲ್ಲ.

-Bahá'u'lláh
-----------------------

ನಿಧನರಾದವರಿಗಾಗಿ (#9441)

“ಮೃತ್ಯುವು ಪ್ರತಿಯೊಬ್ಬ ಭರವಸೆಯುಳ್ಳ ಭಕ್ತಿನಿಗೂ ನಿಜಜೀವನದ ಬಟ್ಟಲನ್ನು ಕಾಣಿಕ ನೀಡುತ್ತದೆ. . . . ಅಮರ ಜೀವನದ ಕೊಡುಗೆಯನ್ನು ಅದು ಅನುಗ್ರಹಿಸುತ್ತದೆ.”

-Bahá'u'lláh
-----------------------

ನಿಧನರಾದವರಿಗಾಗಿ (#9440)

ಓ ನನ್ನ ಸ್ವಾಮಿಯೇ, ಪಾಪಗಳಿಂದ ಮುಕ್ತಿಗೊಳಿಸುವ ಕರುಣಾನಿಧಿಯೇ, ವರಪ್ರದಾತನೇ, ಸಂಕಟ ನಿವಾರಕನೆ, ಇಹ ಶರೀರವನ್ನು ತ್ಯಜಿಸಿ ಆಧ್ಯಾತ್ಮಿಕ ಜಗತ್ತನ್ನು ಏರಿದವರ ಪಾಪಗಳನ್ನು ಕ್ಷಮಿಸೆಂದು ಸತ್ಯವಾಗಿ ನಿನ್ನಲ್ಲಿ ಪ್ರಾರ್ಥಿಸುವೆ.  ಭಗವಂತನೇ, ಅವರನ್ನು ಆಕ್ರಮಗಳಿಂದ ಪಾರುಗಾಣಿಸಿ ಪರಿಶುದ್ಧರನ್ನಾಗಿ ಮಾಡು.  ಅವರ ದುಃಖಗಳನ್ನು ಪರಿಹರಿಸು.  ಅವರಲ್ಲಿ ಕವಿದಿರುವ ಕತ್ತಲೆಯನ್ನು ಬೆಳಕನ್ನಾಗಿ ಪರಿವರ್ತಿಸು. ಸೌಖ್ಯದ ಉದ್ಯಾನವನವನ್ನು ಪ್ರವೇಶಿಸುವಂತೆ ಮಾಡು.  ಪರಿಶುದ್ಧವಾದ ಜಲದಿಂದ ಅವರನ್ನು ಶುಚಿಗೊಳಿಸು.  ನಿನ್ನ  ಅನುಪಮ ತೇಜಸ್ಸನ್ನು ಕಾಣುವಂತೆ ಅನುಗ್ರಹಿಸು.

-`Abdu'l-Bahá
-----------------------

