ಕ್ಷಮೆಯಾಚನೆಗಾಗಿ (#9447)

. . . . ಮನುಷ್ಯರ ಮುಂದೆ ಉಲ್ಲಂಘನೆ ಮತ್ತು ಪಾಪಗಳ ನಿವೇದನೆಗೆ ಅನುಮತಿಯಿಲ್ಲ . . . . ಪಾಪಿಯು, ತನ್ನ ಮತ್ತು ದೇವರ ಮಧ್ಯೆ, ಕೃಪಾಸಾಗರದಿಂದ  ಕೃಪೆಗಾಗಿ ಮೊರೆಯಿಡಬೇಕು, ಉದಾರತೆಯ ಸ್ವರ್ಗದಿಂದ ಕ್ಷಮೆಯಾಚಿಸಿ ಈ ರೀತಿ ಹೇಳಬೇಕು.
ಓ ದೇವರೇ, ನನ್ನ ದೇವರೇ! ಯಾರು ನಿನ್ನ ಮಧುರವಾಣಿಗಳಿಂದ ಅತೀ ಹರ್ಷಿತರಾಗಿ, ದಿವ್ಯ ಹುತಾತ್ಮತೆಯ ಭವ್ಯವಾದ ಉನ್ನತ ಸ್ಥಾನದೆಡೆ ಧಾವಿಸಿದರೋ ಅಂತಹ ನಿನ್ನ ನಿಜ ಪ್ರೇಮಿಗಳ ನೆತ್ತರಿನ ಮೂಲಕ ನಾನು ನಿನ್ನಲ್ಲಿ ಮೊರೆಯಿಡುತ್ತಿದ್ದೇನೆ. ನಿನ್ನ ಜ್ಞಾನದಲ್ಲಿ ಪ್ರತಿಷ್ಠೆಯಾಗಿರುವ ರಹಸ್ಯಗಳ ಮೂಲಕ ಹಾಗೂ ನಿನ್ನ ಉದಾರತೆಯ ಸಾಗರದಲ್ಲಡಗಿರುವ ಮುತ್ತುರತ್ನಗಳ ಮೂಲಕ ನನಗೂ ನನ್ನ ತಂದೆ ಮತ್ತು ನನ್ನ ತಾಯಿಗೂ ಕ್ಷಮೆಯನ್ನೀಡೆಂದು ನಾನು ನಿನ್ನನ್ನು ಯಾಚಿಸುತ್ತಿದ್ದೇನೆ.  ಕೃಪೆಯನ್ನು ತೋರುವವರಲ್ಲಿ, ಸತ್ಯವಾಗಿಯೂ, ನೀನೇ ಅತ್ಯಂತ ದಯಾಳು ಆಗಿರುವೆ.  ಸದಾ ಕ್ಷಮಾಶೀಲನೂ, ಸರ್ವ ಉದಾರಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.
ಓ ಪ್ರಭುವೇ! ಪಾಪಗಳ ಈ ಸಾರವು ನಿನ್ನ ಕೃಪಾ ಸಾಗರದತ್ತ  ತಿರುಗಿರುವುದನ್ನೂ, ಈ ದುರ್ಬಲನು ನಿನ್ನ ದಿವ್ಯ ಶಕ್ತಿಯ ರಾಜ್ಯವನ್ನರಸುವುದನ್ನೂ ಹಾಗೂ ಈ ಬಡ ಜೀವಿಯು ಸ್ವಯಂ ನಿನ್ನ ಐಶ್ವರ್ಯದ ದಿನ ನಕ್ಷತ್ರದೆಡೆ ವಾಲಿರುವುದನ್ನೂ ನೀನು ನೋಡುತ್ತಿರುವೆ.  ಓ ಪ್ರಭುವೇ, ನಿನ್ನ ಕರುಣೆ  ಮತ್ತು ನಿನ್ನ ಕೃಪೆಯಿಂದ ಅವನನ್ನು ನಿರಾಶೆಗೊಳಿಸದಿರು ಅಥವಾ ನಿನ್ನ ದಿನಗಳಲ್ಲಿ ನಿನ್ನ ಅನುಗ್ರಹಿತ ದಿವ್ಯ ದರ್ಶನಗಳಿಂದ ಅವನನ್ನು ಬಹಿಷ್ಕರಿಸದಿರು, ಅಲ್ಲದೆ ನಿನ್ನ ಸ್ವರ್ಗ ಹಾಗೂ ನಿನ್ನ ಪೃಥ್ವಿಯಲ್ಲಿ ವಾಸಿಸುತ್ತಿರುವ ಸರ್ವರಿಗೂ ನೀನು ವಿಶಾಲವಾಗಿ ತೆರೆದಿಟ್ಟಿರುವ ನಿನ್ನ ದ್ವಾರದಿಂದ ಅವನನ್ನು ಹೊರದೂಡದಿರು.
ಅಕಟಕಟಾ! ನನ್ನ ಪಾಪಗಳು ನಿನ್ನ ಪವಿತ್ರತೆಯ ಅಸ್ಥಾನವನ್ನು ಸಮೀಪಿಸುತ್ತಿರುವುದರಿಂದ ನನ್ನನ್ನು ತಡೆದಿವೆ ಹಾಗೂ ನನ್ನ ಅತಿಕ್ರಮ ಪ್ರವೇಶವು ನನ್ನನ್ನು ನಿನ್ನ ಭವ್ಯವಾದ ಪೂಜಾಸ್ಥಾನದಿಂದ ಬಹುದೂರವಿರುವಂತೆ ಮಾಡಿದೆ.  ನಾನು ಮಾಡಬಾರದೆಂದು ನೀನು ನಿಷೇಧಿಸಿರುವುದನ್ನು ನಾನು ಮಾಡಿರುವೆ ಹಾಗೂ ನಾನು ಲಕ್ಷಿಸಬೇಕೆಂದು ನೀನು ವಿಧಾಯಕ ಮಾಡಿರುವುದನ್ನು ನಾನು ಅಲಕ್ಷಿಸಿರುವೆ. ನನ್ನನ್ನು ನಿನ್ನ ಬಳಿ ಸೆಳೆಯುವಂತೆ ಮಾಡುವುದನ್ನು ನಿನ್ನ ಉದಾರತೆಯ ಲೇಖನಿಯಿಂದ ನನಗೆ ಬರೆದಿಡಬೇಕೆಂದೂ, ನಿನ್ನ ಕ್ಷಮೆ ಮತ್ತು ಮನ್ನಿಸುವಿಕೆ  ಹಾಗೂ ನನ್ನ ಮಧ್ಯೆ ನುಸುಳಿರುವ ನನ್ನ ಅತಿಕ್ರಮಣಗಳಿಂದ ನನ್ನನ್ನು ಶುದ್ಧಗೊಳಿಸೆಂದೂ ನಾಮಧೇಯಗಳ ಸಾರ್ವಭೌಮ ಪ್ರಭುವಿನ ಮೂಲಕ ನಾನು ನಿನ್ನನ್ನು ಪ್ರಾರ್ಥಿಸುವೆ.
ನಿಜವಾಗಿಯೂ ನೀನೇ ಸಮರ್ಥ, ಉದಾರಿ, ಪ್ರಬಲನೂ, ಕೃಪಾಳುವೂ ಆದ ನೀನಲ್ಲದೆ ಬೇರೆ ದೇವರಿಲ್ಲ.

-Bahá'u'lláh
-----------------------

ಕ್ಷಮೆಯಾಚನೆಗಾಗಿ (#9448)

ಓ ಪ್ರಭುವೇ, ನಿನಗೆ ಸ್ತೋತ್ರವಾಗಲಿ! ನಮ್ಮ ಪಾಪಗಳಿಗಾಗಿ ನಮ್ಮನ್ನು ಕ್ಷಮಿಸು. ನನ್ನ ಮೇಲೆ ಕರುಣೆ ತೋರು ಹಾಗೂ ನಾವು ನಿನ್ನೆಡೆಗೆ ಹಿಂದಿರುಗುವಂತೆ ಮಾಡು. ನಿನ್ನನ್ನಲ್ಲದೆ ಬೇರಾವುದರ ಮೇಲೂ ಅವಲಂಬಿತರಾಗದಿರುವಂತೆ ನಮ್ಮನ್ನು ಕಷ್ಟಪಡಿಸು, ನೀನು ಪ್ರೀತಿಸುವುದನ್ನೂ, ಇಚ್ಚಿಸುವುದನ್ನೂ ನಿನಗೆ ತಕ್ಕುದಾದ ಒಳ್ಳೆಯದನ್ನೂ ನಮಗೆ ನಿನ್ನ ಔದಾರ್ಯದ ಮೂಲಕ ದಯಪಾಲಿಸು.  ನಿಜವಾಗಿಯೂ ನಂಬಿದವರ ಸ್ಥಾನವನ್ನು ಉನ್ನತಿಗೇರಿಸು.  ನಿನ್ನ ಕೃಪೆಯಿಂದ, ಕ್ಷಮಾಶೀಲತೆಯಿಂದ ಅವರನ್ನು ಮನ್ನಿಸು.
ನೀನು ನಿಜವಾಗಿಯೂ ಆಪತ್ತಿನಲ್ಲಿ ಸಹಾಯಕನು,  ಸ್ವಯಮಾಧಾರನು.

-The Báb
-----------------------

ಕ್ಷಮೆಯಾಚನೆಗಾಗಿ (#9449)

ಓ ನನ್ನ ದೇವರೇ, ಓ ನನ್ನ ಪ್ರಭುವೇ, ಓ ನನ್ನ ಒಡೆಯನೇ! ನಾನು, ನಿನ್ನ ಪ್ರೀತಿಯನ್ನಲ್ಲದೆ,  ಬೇರಾವುದೋ ಆನಂದ, ಅಥವಾ ನಿನ್ನ ಸಾಮೀಪ್ಯವನ್ನಲ್ಲದೆ ಬೇರಾವುದೋ ಸುಖ ಅಥವಾ ನಿನ್ನ ಸಂತೃಪ್ತಿಯನ್ನಲ್ಲದೆ ಬೇರಾವುದೋ ಸಂತೋಷ ಅಥವಾ ನಿನ್ನೊಡನೆ ಭಾವೈಕ್ಯವನ್ನಲದೆ ಬೇರಾವುದೋ ಬದುಕನ್ನು ಅರಸಿದುದ್ದಕ್ಕಾಗಿ, ನನ್ನನ್ನು ಮನ್ನಿಸೆಂದು ನಿನ್ನನ್ನು ಬೇಡುವೆ.   - ಬಾಬ್
ಓ ಸ್ವಾಮಿಯೇ, ನೀನೇ ಜನರ ಆಶಾಕಿರಣ, ಈ ಎಲ್ಲ ನಿನ್ನ ಸೇವಕರ ರಕ್ಷಕ. ರಹಸ್ಯ ಹಾಗೂ ಪವಾಡಗಳನ್ನು ನೀನು ಬಲ್ಲೆ.  ನಾವೆಲ್ಲ ಪಾಪಿಗಳು ನೀನಾದರೋ ಇಂಥ ಪಾಪಗಳ ನಿವಾರಕ ಕರುಣಾಮಯಿ ಹಾಗೂ ಕೃಪಾಳು ಓ ಪ್ರಭುವೇ ನಮ್ಮ ಲೋಪದೋಷಗಳನ್ನು ಗಮನಿಸಬೇಡ. ದಯೆ ಹಾಗೂ ಕರುಣೆಯಿಂದ ಕಾಣು.  ನಮ್ಮ ಲೋಪದೋಷಗಳು ಹಲವು ಆದರೆ ನಿನ್ನ ಕ್ಷಮಾಗುಣದ ಸಾಗರ ಬಹು ವಿಶಾಲ.  ಆದ್ದರಿಂದ ನಮ್ಮನ್ನು ದೃಢಗೊಳಿಸು ಬಲಪಡಿಸು ನಾವು ನಿನಗೆ ಸಮರ್ಪಣವಾಗುವಂತೆ ಸಹಾಯವೆಸಗು ನಮ್ಮ ಆತ್ಮಗಳನ್ನು ಬೆಳಗಿಸು ಕಣ್ಣುಗಳು ತೆರೆದು ನೋಡುವಂತೆ ಮಾಡು.  ಕಿವಿಗಳು ಗಮನಿಸುವಂತೆ ಮಾಡು ಸತ್ತವರನ್ನು ಉದ್ದರಿಸು.  ರೋಗಿಗಳನ್ನು ಗುಣಪಡಿಸು ಬಡವರನ್ನು ಸಿರಿವಂತರನ್ನಾಗಿ ಮಾಡು.  ನಿರಾಶ್ರಿತರಲ್ಲಿ ವಿಶ್ವಾಸವನ್ನು ಮೂಡಿಸು.  ನಿನ್ನಲ್ಲಿ ನಮ್ಮನ್ನು ಅರ್ಪಿಸಿಕೊಳ್ಳು.  ನಿನ್ನ ಪ್ರೀತಿಯ ಜ್ಯೋತಿಯಿಂದ ನಮ್ಮಲ್ಲಿ ಬೆಳಕನ್ನುಂಟುಮಾಡು.  ನೀನು ಉದಾರಿ, ಕರುಣಾಶಾಲಿ, ವಾತ್ಸಲ್ಯಮಯಿ.

-`Abdu'l-Bahá
-----------------------

ಕ್ಷಮೆಯಾಚನೆಗಾಗಿ (#9450)

ಓ ಮನ್ನಿಸುವ ಭಗವಂತನೇ, ಈ ಸೇವಕರು ನಿನ್ನತ್ತ ತಿರುಗಿ ನಿನ್ನ ದಯೆ ಹಾಗೂ ಉದಾರತೆಯನ್ನು ಯಾಚಿಸುತ್ತಿರುವರು. ದೇವರೇ, ಅವರ ಹೃದಯಗಳನ್ನು ನಿನ್ನ ಪ್ರೀತಿಗೆ ಆರ್ಹವಾಗಿರುವಂತೆ, ಉತ್ತಮವಾದುದನ್ನಾಗಿಯೂ, ಪರಿಶುದ್ಧವನ್ನಾಗಿಯೋ ಮಾಡುವವನಾಗು, ಅವರ ಮೂಲಕ ಸೂರ್ಯಪ್ರಭೆ ಬೆಳಗಲು ಆತ್ಮಗಳನ್ನು ಶುದ್ಧ ಹಾಗೂ ಪವಿತ್ರಗೊಳಿಸುವವನಾಗು.  ನಿನ್ನ ಪ್ರಭೆಯನ್ನು ಕಾಣುವ ಕಣ್ಣುಗಳನ್ನು ಶುದ್ಧಗೊಳಿಸಿ ಶ್ರೇಷ್ಠರನ್ನಾಗಿ ಮಾಡು.  ನಿನ್ನ ಕರೆಗೆ ಓಗೊಡುವಂತೆ ಕಿವಿಗಾಳನ್ನು ಒಳ್ಳೆಯದನ್ನಾಗಿ ಮಾಡು.  ಪ್ರಭುವೇ, ನಾವು ನಿಜಕ್ಕೂ ದುರ್ಬಲರು ಆದರೆ ನೀನು ಪ್ರಬಲ ನಾವು ಬಡವರು, ನೀನು ಶ್ರೀಮಂತ, ನಾವು ನಿನ್ನನ್ನು ಅರಸುವವರು.  ನೀನಾದರೋ ಆಶ್ರಯ ನೀಡುವವ. ಪ್ರಭುವೇ, ನಮ್ಮ ಮೇಲೆ ಕನಿಕರವಿತ್ತು ಕ್ಷಮಿಸು.  ನಿನ್ನ ಉಪಕಾರಕ್ಕೆ ಅರ್ಹತೆ ಹಾಗೂ ಸಿದ್ಧತೆಯನ್ನು ಕರುಣಿಸು.  ನಿನ್ನ ಪ್ರೇಮದ ಕಿಡಿಯಿಂದ ಹೊತ್ತಿದ ಜ್ವಾಲೆಗೆ ಆಕರ್ಷಕನಾಗಿ ನಿನ್ನ ಸಾನ್ನಿದ್ಯವನ್ನು ಸಮೀಪಿಸಲು ಅವಕಾಶ ದಯಪಾಲಿಸು.  ನಿನ್ನ ಪವಿತ್ರಾತ್ಮದ ಶ್ವಾಸದ ಮೂಲಕ ಈ ಪ್ರಭಾವಯುತ ಯುಗದಲ್ಲಿ ಪುನರುಜ್ಜೀವಿಸುವಂತಾಗಲಿ.  ನೀನು ಪರಮ ಸತ್ವಶಾಲಿ, ಬಲಾಢ್ಯ, ಕರುಣಾಳು, ಅಷ್ಟೇ ಅಲ್ಲ ದಯಾಸಾಗರ.

-`Abdu'l-Bahá
-----------------------

